ಜಗತ್ತಿನ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಕ್ರಿಸ್ಟಿಯಾನೋ ರೊನಾಲ್ಡೊ, ಕ್ರೀಡಾ ಕ್ಷೇತ್ರ ಮಾತ್ರವಲ್ಲದೆ ಉದ್ಯಮ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಇತ್ತೀಚೆಗೆ ಅವರು ಸಿಲಿಕಾನ್ ವ್ಯಾಲಿಯ ಪ್ರಮುಖ ಕೃತಕ ಬುದ್ಧಿಮತ್ತೆ (Artificial Intelligence) ಕಂಪನಿಯಾದ ‘ಪರ್ಪ್ಲೆಕ್ಸಿಟಿ ಎಐ’ (Perplexity AI) ನಲ್ಲಿ ಹೂಡಿಕೆ ಮಾಡುವ ಮೂಲಕ ತಂತ್ರಜ್ಞಾನ ಲೋಕಕ್ಕೆ ಲಗ್ಗೆ ಇಟ್ಟಿದ್ದಾರೆ.
ಏನಿದು ಪರ್ಪ್ಲೆಕ್ಸಿಟಿ ಎಐ (Perplexity AI)?
ಪರ್ಪ್ಲೆಕ್ಸಿಟಿ Ai ಒಂದು ಅತ್ಯಾಧುನಿಕ ‘ಸರ್ಚ್ ಇಂಜಿನ್’ (Search Engine) ಆಗಿದ್ದು, ಇದು ಗೂಗಲ್ (Google) ಮತ್ತು ಚಾಟ್‌ಜಿಪಿಟಿ (ChatGPT) ಯಂತಹ ದಿಗ್ಗಜ ಕಂಪನಿಗಳಿಗೆ ಪ್ರಬಲ ಪೈಪೋಟಿ ನೀಡುತ್ತಿದೆ. ನಾವು ಕೇಳುವ ಪ್ರಶ್ನೆಗಳಿಗೆ ನೇರವಾದ ಉತ್ತರಗಳನ್ನು ನೀಡುವುದು ಮತ್ತು ಆ ಮಾಹಿತಿಯ ಮೂಲಗಳನ್ನು (Sources) ಒದಗಿಸುವುದು ಇದರ ವಿಶೇಷತೆಯಾಗಿದೆ. ಅರವಿಂದ್ ಶ್ರೀನಿವಾಸ್ ಎಂಬ ಭಾರತೀಯ ಮೂಲದ ಉದ್ಯಮಿ ಈ ಕಂಪನಿಯ ಸಿಇಒ ಆಗಿರುವುದು ವಿಶೇಷ.
ರೊನಾಲ್ಡೊ ಅವರ ಪಾತ್ರವೇನು?
ಕೇವಲ ಹೂಡಿಕೆದಾರರಾಗಿ ಮಾತ್ರವಲ್ಲದೆ, ರೊನಾಲ್ಡೊ ಅವರು ಪರ್ಪ್ಲೆಕ್ಸಿಟಿ ಎಐನ ಜಾಗತಿಕ “ಬ್ರಾಂಡ್ ಅಂಬಾಸಿಡರ್” (Brand Ambassador) ಆಗಿಯೂ ಕಾರ್ಯನಿರ್ವಹಿಸಲಿದ್ದಾರೆ. ಈ ಒಪ್ಪಂದದ ಭಾಗವಾಗಿ, ಪರ್ಪ್ಲೆಕ್ಸಿಟಿ ಎಐ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ “ರೊನಾಲ್ಡೊ ಹಬ್” (Ronaldo Hub) ಎಂಬ ವಿಶೇಷ ವಿಭಾಗವನ್ನು ಪರಿಚಯಿಸಿದೆ. ಇಲ್ಲಿ ಅಭಿಮಾನಿಗಳು ರೊನಾಲ್ಡೊ ಅವರ ವೃತ್ತಿಜೀವನದ ಮೈಲಿಗಲ್ಲುಗಳು, ಅಂಕಿಅಂಶಗಳು ಮತ್ತು ಸಾಧನೆಗಳ ಬಗ್ಗೆ ಎಐ ಮೂಲಕ ನಿಖರ ಮಾಹಿತಿ ಪಡೆಯಬಹುದು.
ಫುಟ್ಬಾಲ್ ಮೈದಾನದ ಹೊರಗೆ ರೊನಾಲ್ಡೊ ಒಬ್ಬ ಯಶಸ್ವಿ ಉದ್ಯಮಿಯಾಗಿದ್ದಾರೆ. ಅವರ ಪ್ರಮುಖ ಹೂಡಿಕೆಗಳು ಈ ಕೆಳಗಿನಂತಿವೆ:
ಪೆಸ್ಟಾನಾ CR7 ಹೋಟೆಲ್ಸ್ (Pestana CR7 Hotels) ಮಾಲೀಕತ್ವ ಹೊಂದಿದ್ದ ರೊನಾಲ್ಡೋ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಐಷಾರಾಮಿ ಹೋಟೆಲ್ ಸರಪಳಿಯನ್ನು ಹೊಂದಿದ್ದಾರೆ. ‘CR7’ ಬ್ರಾಂಡ್ ಅಡಿಯಲ್ಲಿ ಒಳ ಉಡುಪು, ಸುಗಂಧ ದ್ರವ್ಯ (Perfumes) ಮತ್ತು ಕನ್ನಡಕಗಳನ್ನು ಮಾರಾಟ ಮಾಡುತ್ತಾರೆ. ‘CR7 ಕ್ರಂಚ್ ಫಿಟ್‌ನೆಸ್’ ಜಿಮ್‌ಗಳು ಮತ್ತು ಕೂದಲು ಕಸಿ ಚಿಕಿತ್ಸಾಲಯಗಳಲ್ಲಿ (Insparya Hair Clinic) ಹೂಡಿಕೆ ಮಾಡಿದ್ದಾರೆ. ಈಗ ಪರ್ಪ್ಲೆಕ್ಸಿಟಿ Ai ಮೂಲಕ ತಂತ್ರಜ್ಞಾನ ಕ್ಷೇತ್ರಕ್ಕೂ ವಿಸ್ತರಿಸಿದ್ದಾರೆ.
ಒಂದು ಐತಿಹಾಸಿಕ ವೃತ್ತಿಜೀವನ ಪೋರ್ಚುಗಲ್‌ನ ಪುಟ್ಟ ದ್ವೀಪದಲ್ಲಿ ಜನಿಸಿದ ರೊನಾಲ್ಡೊ, ತಮ್ಮ ಕಠಿಣ ಪರಿಶ್ರಮದಿಂದಲೇ ವಿಶ್ವದ ಉತ್ತುಂಗಕ್ಕೇರಿದವರು. ಮ್ಯಾಂಚೆಸ್ಟರ್ ಯುನೈಟೆಡ್, ರಿಯಲ್ ಮ್ಯಾಡ್ರಿಡ್, ಜುವೆಂಟಸ್ ಮತ್ತು ಅಲ್-ನಸರ್ ನಂತಹ ಕ್ಲಬ್‌ಗಳ ಪರ ಆಡಿರುವ ಇವರು, 5 ಬಾರಿ ಪ್ರತಿಷ್ಠಿತ ‘ಬ್ಯಾಲನ್ ಡಿ’ಓರ್’ (Ballon d’Or) ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅಂತರರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಅತಿ ಹೆಚ್ಚು ಗೋಲುಗಳಿಸಿದ ದಾಖಲೆ ಇವರ ಹೆಸರಲ್ಲಿದೆ.
ಇದನ್ನೂ ಓದಿ: ಗೂಗಲ್ ಜೆಮಿನಿ ಅಬ್ಬರಕ್ಕೆ ‘ಕೋಡ್ ರೆಡ್’ ಘೋಷಿಸಿದ OpenAI; ಏನಿದು ‘ಕೋಡ್ ರೆಡ್’?
ಸ್ಪರ್ಧಾತ್ಮಕ Ai ಮಾರುಕಟ್ಟೆ:
ಗೂಗಲ್ ಜೆಮಿನಿ (Gemini), ಓಪನ್ Ai ನ ಚಾಟ್‌ಜಿಪಿಟಿ (ChatGPT) ಮತ್ತು ಮೈಕ್ರೋಸಾಫ್ಟ್ ಕೊಪೈಲಟ್ (Copilot) ನಂತಹ ದಿಗ್ಗಜಗಳಿರುವ ಎಐ ಕ್ಷೇತ್ರದಲ್ಲಿ, ಪರ್ಪ್ಲೆಕ್ಸಿಟಿ Ai ತನ್ನ ನಿಖರತೆ ಮತ್ತು ವಿಶ್ವಾಸಾರ್ಹತೆಯ ಮೂಲಕ ಗಮನ ಸೆಳೆಯುತ್ತಿದೆ. ಈಗ ರೊನಾಲ್ಡೊ ಅವರಂತಹ ಜಾಗತಿಕ ಐಕಾನ್ ಜೊತೆಗೂಡಿರುವುದರಿಂದ, ಈ ಕಂಪನಿಯು ಜನಸಾಮಾನ್ಯರಿಗೆ ಇನ್ನಷ್ಟು ಹತ್ತಿರವಾಗುವ ನಿರೀಕ್ಷೆಯಿದೆ.
“ಗೆಲ್ಲುವುದನ್ನು ಎಂದಿಗೂ ನಿಲ್ಲಿಸಬೇಡಿ” ಎಂಬುದು ರೊನಾಲ್ಡೊ ಅವರ ತತ್ವ. ಫುಟ್ಬಾಲ್ ಮೈದಾನದಲ್ಲಿ ಗೆದ್ದ ಅವರು, ಈಗ ಭವಿಷ್ಯದ ತಂತ್ರಜ್ಞಾನವಾದ ಎಐನಲ್ಲೂ ಗೆಲುವಿನ ಕುದುರೆ ಏರಲು ಹೊರಟಿದ್ದಾರೆ. ಅವರ ಈ ನಡೆ ಕ್ರೀಡಾಪಟುಗಳು ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಹೊಸ ಪ್ರೇರಣೆಯಾಗಿದೆ.
