Match 05 | LSG vs DC | 01-04-2026
ಲಕ್ನೋದ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಟಾಟಾ ಐಪಿಎಲ್ 2026ರ 5ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ (DC) 6 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಆರಂಭಿಕ ಆಘಾತದ ಹೊರತಾಗಿಯೂ ಯುವ ಬ್ಯಾಟರ್ ಸಮೀರ್ ರಿಜ್ವಿ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅವರ ಅಮೋಘ ಜೊತೆಯಾಟ ಡೆಲ್ಲಿಗೆ ಸ್ಮರಣೀಯ ಗೆಲುವು ತಂದುಕೊಟ್ಟಿತು.
ಲಕ್ನೋ ಬ್ಯಾಟಿಂಗ್ ವೈಫಲ್ಯ:
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಸರ್ ಪಟೇಲ್ ಮೊದಲು ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡರು. ಅವರ ಈ ನಿರ್ಧಾರವನ್ನು ಡೆಲ್ಲಿ ಬೌಲರ್‌ಗಳು ಸಮರ್ಥಿಸಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ರಿಷಭ್ ಪಂತ್ ನೇತೃತ್ವದ ಲಕ್ನೋ ತಂಡ ನಿರಂತರವಾಗಿ ವಿಕೆಟ್ ಕಳೆದುಕೊಂಡು 18.4 ಓವರ್‌ಗಳಲ್ಲಿ ಕೇವಲ 141 ರನ್‌ಗಳಿಗೆ ಆಲೌಟ್ ಆಯಿತು.
ಲಕ್ನೋ ಪರ ಮಿಚೆಲ್ ಮಾರ್ಷ್ 28 ಎಸೆತಗಳಲ್ಲಿ 35 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ನಾಯಕ ರಿಷಭ್ ಪಂತ್ ಕೇವಲ 7 ರನ್ ಗಳಿಸಿ ದುರದೃಷ್ಟವಶಾತ್ ರನೌಟ್ ಆದರು. ನಿಕೋಲಸ್ ಪೂರನ್ ಸೇರಿದಂತೆ ಪ್ರಮುಖ ಬ್ಯಾಟರ್‌ಗಳು ವಿಫಲರಾದರು. ಡೆಲ್ಲಿ ಪರ ಬೌಲಿಂಗ್‌ನಲ್ಲಿ ಲುಂಗಿ ಎನ್ಗಿಡಿ (3/27) ಮತ್ತು ಟಿ. ನಟರಾಜನ್ (3/29) ತಲಾ 3 ವಿಕೆಟ್ ಪಡೆದು ಮಿಂಚಿದರೆ, ಸ್ಪಿನ್ನರ್ ಕುಲ್ದೀಪ್ ಯಾದವ್ 2 ವಿಕೆಟ್ ಕಬಳಿಸಿ ಲಕ್ನೋವನ್ನು ಕಟ್ಟಿಹಾಕಿದರು.
ಡೆಲ್ಲಿಗೆ ಆರಂಭಿಕ ಆಘಾತ ನೀಡಿದ ಶಮಿ:
142 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭ ಕೂಡ ಕಳಪೆಯಾಗಿತ್ತು. ಲಕ್ನೋ ಪರ ಮೊದಲ ಪಂದ್ಯವನ್ನಾಡಿದ ಅನುಭವಿ ವೇಗಿ ಮೊಹಮ್ಮದ್ ಶಮಿ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಕನ್ನಡಿಗ ಕೆ.ಎಲ್. ರಾಹುಲ್ (0) ಅವರನ್ನು ಔಟ್ ಮಾಡಿ ಆಘಾತ ನೀಡಿದರು. ನಂತರ ಪಥುಮ್ ನಿಸ್ಸಾಂಕ, ನಿತೀಶ್ ರಾಣಾ ಮತ್ತು ನಾಯಕ ಅಕ್ಸರ್ ಪಟೇಲ್ (0) ಬೇಗನೆ ಪೆವಿಲಿಯನ್ ಸೇರಿದರು. ಕೇವಲ 26 ರನ್ ಗಳಿಸುವಷ್ಟರಲ್ಲಿ ಡೆಲ್ಲಿ ತನ್ನ ಪ್ರಮುಖ 4 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು.
ಸಮೀರ್ ರಿಜ್ವಿ ಮತ್ತು ಸ್ಟಬ್ಸ್ ಆಕರ್ಷಕ ಆಟ:
ಡೆಲ್ಲಿ 4 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿದ್ದಾಗ 5ನೇ ವಿಕೆಟ್‌ಗೆ ಜೊತೆಯಾದ ಯುವ ತಾರೆ ಸಮೀರ್ ರಿಜ್ವಿ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದರು. ಲಕ್ನೋ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ಈ ಜೋಡಿ ಮುರಿಯದ 119 ರನ್‌ಗಳ ಶತಕದ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದ ಸಮೀರ್ ರಿಜ್ವಿ ಕೇವಲ 47 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅಜೇಯ 70 ರನ್ ಸಿಡಿಸಿದರು. ಅವರಿಗೆ ಅತ್ಯುತ್ತಮ ಸಾಥ್ ನೀಡಿದ ಟ್ರಿಸ್ಟಾನ್ ಸ್ಟಬ್ಸ್ 32 ಎಸೆತಗಳಲ್ಲಿ ಅಜೇಯ 39 ರನ್ ಗಳಿಸಿದರು.
ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ 17.1 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ, 17 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿತು.
ಪಂದ್ಯಶ್ರೇಷ್ಠ: ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಅಜೇಯ 70 ರನ್ ಸಿಡಿಸಿ ಡೆಲ್ಲಿ ತಂಡಕ್ಕೆ ಅದ್ಭುತ ಜಯ ತಂದುಕೊಟ್ಟ ‘ಸಮೀರ್ ರಿಜ್ವಿ’ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.


