ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಮತ್ತು ಐಪಿಎಲ್ನ ಅತ್ಯಂತ ಜನಪ್ರಿಯ ವಿದೇಶಿ ಆಟಗಾರರಲ್ಲಿ ಒಬ್ಬರಾದ ಫಾಫ್ ಡು ಪ್ಲೆಸಿಸ್ ಐಪಿಎಲ್ 2026ರ ಮಿನಿ ಹರಾಜು ಪ್ರಕ್ರಿಯೆಯಿಂದ ದೂರ ಉಳಿಯುವ ಮೂಲಕ ಕ್ರಿಕೆಟ್ ಜಗತ್ತಿಗೆ ಅಚ್ಚರಿ ಮೂಡಿಸಿದ್ದಾರೆ. ಬರೋಬ್ಬರಿ 14 ಸೀಸನ್ಗಳ ಕಾಲ ಭಾರತೀಯ ಲೀಗ್ನಲ್ಲಿ ಮಿಂಚಿದ್ದ ಫಾಫ್, ಈ ಬಾರಿ ಪಾಕಿಸ್ತಾನ್ ಸೂಪರ್ ಲೀಗ್ (PSL) ಆಡಲು ನಿರ್ಧರಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
2011ರಿಂದ ಐಪಿಎಲ್ನಲ್ಲಿ ಸಕ್ರಿಯವಾಗಿದ್ದ ಫಾಫ್ ಡು ಪ್ಲೆಸಿಸ್, ಚೆನ್ನೈ ಸೂಪರ್ ಕಿಂಗ್ಸ್ (CSK), ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ (RPS), ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಇತ್ತೀಚೆಗೆ ಡೆಲ್ಲಿ ಕ್ಯಾಪಿಟಲ್ಸ್ (DC) ಪರ ಆಡಿದ್ದರು. ಆದರೆ 2025ರ ಸೀಸನ್ ನಲ್ಲಿ ಡೆಲ್ಲಿ ಪರ ಸಾಧಾರಣ ಪ್ರದರ್ಶನ ನೀಡಿದ್ದರಿಂದ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿತ್ತು. ಇದೀಗ ಡಿಸೆಂಬರ್ 16 ರಂದು ನಡೆಯಲಿರುವ 2026ರ ಐಪಿಎಲ್ ಹರಾಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸದಿರಲು ಫಾಫ್ ನಿರ್ಧರಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, “14 ವರ್ಷಗಳ ಐಪಿಎಲ್ ಪಯಣ ಅದ್ಭುತವಾಗಿತ್ತು. ಭಾರತ ನನಗೆ ವಿಶೇಷವಾದ ನೆನಪುಗಳನ್ನು ಮತ್ತು ಸ್ನೇಹವನ್ನು ನೀಡಿದೆ. ಆದರೆ ಈ ಬಾರಿ ನಾನು ಹೊಸ ಸವಾಲನ್ನು ಎದುರು ನೋಡುತ್ತಿದ್ದು, ಪಿಎಸ್ಎಲ್ (PSL) ನಲ್ಲಿ ಆಡಲು ನಿರ್ಧರಿಸಿದ್ದೇನೆ,” ಎಂದು ತಿಳಿಸಿದ್ದಾರೆ.
ಐಪಿಎಲ್ಗಿಂತ ಪಿಎಸ್ಎಲ್ ಆಯ್ಕೆ ಮಾಡಿದ್ದೇಕೆ?
ಡು ಪ್ಲೇಸ್ಸಿಸ್ ಅವರ ಈ ನಿರ್ಧಾರಕ್ಕೆ ಪ್ರಮುಖ ಕಾರಣವೆಂದರೆ ‘ಹೊಸ ಸವಾಲು’ ಮತ್ತು ‘ಕ್ರಿಕೆಟ್ ವೇಳಾಪಟ್ಟಿ’. ಐಪಿಎಲ್ ಹರಾಜಿನ ಬದಲು ಪಾಕಿಸ್ತಾನದ ಪಿಎಸ್ಎಲ್ ಲೀಗ್ನಲ್ಲಿ ಆಡುವ ಮೂಲಕ ವಿಭಿನ್ನ ಅನುಭವ ಪಡೆಯಲು ಅವರು ಬಯಸಿದ್ದಾರೆ. ಅವರು ಈ ಹಿಂದೆ ಕೂಡ ಪಿಎಸ್ಎಲ್ನಲ್ಲಿ ಪೇಶಾವರ್ ಝಲ್ಮಿ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ ಆಡಿದ್ದರು. ಐಪಿಎಲ್ನಲ್ಲಿ ತೀವ್ರ ಸ್ಪರ್ಧೆ ಮತ್ತು ಕಳೆದ ಸೀಸನ್ ವೈಫಲ್ಯದ ಬಳಿಕ ಅವರು ತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲಿ ಪಿಎಸ್ಎಲ್ ಕಡೆಗೆ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ.
ಡು ಪ್ಲೆಸಿಸ್ ಅವರ ಐಪಿಎಲ್ ದಾಖಲೆಗಳು
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡಿದ ವಿದೇಶಿ ಬ್ಯಾಟರ್ಗಳಲ್ಲಿ ಒಬ್ಬರು. ತಮ್ಮ ನಾಯಕತ್ವದಲ್ಲಿ ಆರ್ಸಿಬಿ ತಂಡವನ್ನು 2022, 2023 ಮತ್ತು 2024ರಲ್ಲಿ ಮುನ್ನಡೆಸಿ, ಪ್ಲೇ-ಆಫ್ ಹಂತಕ್ಕೆ ಕರೆದೊಯ್ದಿದ್ದರು. ಅವರು ಆಡಿದ ಒಟ್ಟು ಪಂದ್ಯಗಳು 154, ಒಟ್ಟು ರನ್ಗಳು 4773, ಸರಾಸರಿ 35.10, ಸ್ಟ್ರೈಕ್ ರೇಟ್ 135.79, ಅರ್ಧ ಶತಕಗಳು 39, ಗರಿಷ್ಠ ಸ್ಕೋರ್ 96, ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪರ 2 ಬಾರಿ (2018, 2021) ಚಾಂಪಿಯನ್ ಆಗಿದ್ದರು.
ಐಪಿಎಲ್ ಅಭಿಮಾನಿಗಳಿಂದ ಟ್ರೋಲ್ಸ್ (Trolls)
ಕೆಲವರು ಡು ಪ್ಲೆಸಿಸ್ ಐಪಿಎಲ್ ಬಿಟ್ಟು ಪಿಎಸ್ಎಲ್ ಆಯ್ಕೆ ಮಾಡಿಕೊಂಡಿದ್ದನ್ನು ಟೀಕಿಸಿದ್ದಾರೆ. “ಟಿವಿ ಮಾರಿ ರಿಮೋಟ್ ತೆಗೆದುಕೊಂಡ ಹಾಗೆ” ಎಂಬ ಮೀಮ್ಗಳು ವೈರಲ್ ಆಗುತ್ತಿವೆ. ಅಂದರೆ ದೊಡ್ಡ ಲೀಗ್ ಬಿಟ್ಟು ಸಣ್ಣ ಲೀಗ್ಗೆ ಹೋದರು ಎಂಬ ಅರ್ಥದಲ್ಲಿ ಹಾಸ್ಯ ಮಾಡುತ್ತಿದ್ದಾರೆ.
ಪಾಕಿಸ್ತಾನಿ ಅಭಿಮಾನಿಗಳು ಪಿಎಸ್ಎಲ್ಗೆ ಫಾಫ್ ಬರುತ್ತಿರುವುದು ಪಾಕಿಸ್ತಾನಿ ಕ್ರಿಕೆಟ್ ಪ್ರೇಮಿಗಳಲ್ಲಿ ಸಂಭ್ರಮ ತಂದಿದೆ. “ವೆಲ್ಕಮ್ ಟು ಪಾಕಿಸ್ತಾನ್ ಫಾಫ್,” ಎಂಬ ಸಂದೇಶಗಳು ಹರಿದಾಡುತ್ತಿವೆ.
ಮುಂದೇನು? ಫಾಫ್ ಡು ಪ್ಲೆಸಿಸ್ ತಮ್ಮ ಸಂದೇಶದಲ್ಲಿ “ಇದು ವಿದಾಯವಲ್ಲ (This isn’t goodbye)” ಎಂದು ಹೇಳುವ ಮೂಲಕ ಭವಿಷ್ಯದಲ್ಲಿ ಮತ್ತೆ ಭಾರತಕ್ಕೆ ಬರುವ ಅಥವಾ ಕೋಚ್/ಮೆಂಟರ್ ಆಗಿ ಕಾಣಿಸಿಕೊಳ್ಳುವ ಸುಳಿವು ನೀಡಿದ್ದಾರೆ. ಸದ್ಯಕ್ಕೆ, ಕ್ರಿಕೆಟ್ ಪ್ರೇಮಿಗಳು ಫಾಫ್ ಅವರನ್ನು ಐಪಿಎಲ್ ಅಖಾಡದಲ್ಲಿ ಮಿಸ್ ಮಾಡಿಕೊಳ್ಳಲಿದ್ದಾರೆ ಎಂಬುದಂತೂ ಸತ್ಯ.
