ಟೆಸ್ಲಾ ಮತ್ತು ಸ್ಪೇಸ್ಎಕ್ಸ್ನಂತಹ ಕಂಪನಿಗಳ ಮೂಲಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದ ಎಲಾನ್ ಮಸ್ಕ ಈಗ ಜ್ಞಾನದ ಜಗತ್ತಿನಲ್ಲಿ ಒಂದು ಹೊಸ ಹೆಜ್ಜೆ ಇಡಲು ಮುಂದಾಗಿದ್ದಾರೆ.
ಸೆಪ್ಟೆಂಬರ್ 30, 2025 ರಂದು ಎಲಾನ್ ಮಸ್ಕ್ ಗ್ರೋಕಿಪೀಡಿಯಾ ಎನ್ನುವ ಹೊಸ ಪ್ರಾಜೆಕ್ಟ್ ಅನ್ನು ತಮ್ಮ X ಖಾತೆಯಲ್ಲಿ ಘೋಷಿಸಿದ್ದಾರೆ. ಇದು ವಿಕಿಪೀಡಿಯಾದಂತಹ ಮಾಹಿತಿ ತಾಣಕ್ಕೆ ಪರ್ಯಾಯವಾಗಿ, ಹೆಚ್ಚು ನಿಖರ, ಪಕ್ಷಪಾತರಹಿತ ಮತ್ತು ವಿಶ್ವಾಸಾರ್ಹ ಜ್ಞಾನದ ಮೂಲವನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಪೊಸ್ಟ್ ಮಾಡಿದ್ದಾರೆ.
ಗ್ರೋಕಿಪೀಡಿಯಾ ಎಂದರೇನು?
ಗ್ರೋಕಿಪೀಡಿಯಾ XAi ನ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಿಂದ ನಿರ್ಮಿಸಿರುವ ಓಪನ್-ಸೋರ್ಸ್ ಜ್ಞಾನಕೋಶವಾಗಿದೆ. ಇದು ವಿಕಿಪೀಡಿಯಾದಂತಹ ತಾಣಗಳಿಂದ ಭಿನ್ನವಾಗಿ, AI ಸಹಾಯದಿಂದ ಮಾಹಿತಿಯನ್ನು ಸ್ವಯಂಚಾಲಿತವಾಗಿ ಪರಿಶೀಲಿಸಿ, ತಪ್ಪುಗಳನ್ನು ಸರಿಪಡಿಸುತ್ತದೆ. ಎಲಾನ್ ಮಸ್ಕ್ ಇದನ್ನು “ವಿಕಿಪೀಡಿಯಾಕ್ಕಿಂತ ದೊಡ್ಡ ಸುಧಾರಣೆ” ಎಂದು ಹೇಳಿದ್ದಾರೆ. ವಿಶ್ವದ ಜ್ಞಾನವನ್ನು ಹೆಚ್ಚು ಸತ್ಯಾಸತ್ಯತೆಯಿಂದ ಮತ್ತು ತಟಸ್ಥವಾಗಿ ವಿಶ್ವಾಸಾರ್ಹವಾಗಿ ಒದಗಿಸುವ ಗುರಿಯನ್ನು ಹೊಂದಿದೆ.
ಯಾವಾಗ ಬಿಡುಗಡೆ?
ಗ್ರೋಕಿಪೀಡಿಯಾದ ಬಿಡುಗಡೆಯ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ, ಆದರೆ XAi ಈ ಯೋಜನೆಯನ್ನು ಶೀಘ್ರಗತಿಯಲ್ಲಿ ಅಭಿವೃದ್ಧಿಪಡಿಸಲು ತಂಡವನ್ನು ರಚಿಸುತ್ತಿದೆ. ಈ ಯೋಜನೆಯಲ್ಲಿ ಕೆಲಸ ಮಾಡಲು ಆಸಕ್ತರಿಗೆ XAi ಆಹ್ವಾನ ನೀಡಿದೆ. ಗ್ರೋಕಿಪೀಡಿಯಾವು ಜ್ಞಾನವನ್ನು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡುವ ಜೊತೆಗೆ, ತಂತ್ರಜ್ಞಾನ ಮತ್ತು ಜ್ಞಾನದ ಕ್ಷೇತ್ರದಲ್ಲಿ ಒಂದು ಮಹತ್ವದ ಹೆಜ್ಜೆಯಾಗಲಿದೆ. ಈ ಮೂಲಕ ಜಗತ್ತಿಗೆ ಹೊಸ ದಿಕ್ಕನ್ನು ತೋರಿಸಲಿದೆ. ಗ್ರೋಕಿಪೀಡಿಯಾದ ಬಿಡುಗಡೆಗಾಗಿ ವಿಶ್ವವು ಕಾತರದಿಂದ ಕಾಯುತ್ತಿದೆ